ಭಾಕ್ರಾ - ನಾಂಗಲ್ ನದೀಕಣಿವೆ ಯೋಜನೆ	

	ಭಾರತದಲ್ಲೇ ಅತ್ಯಂತ ದೊಡ್ಡ ನದೀಕಣಿವೆ ಯೋಜನೆ. ಪಂಜಾಬ್ ರಾಜ್ಯದ ರಾಜಧಾನಿ ಚಂದೀಗಢದಿಂದ ಸುಮಾರು 115 ಕಿಲೊಮೀಟರ್ ದೂರದ ಭಾಕ್ರ ಎಂಬಲ್ಲಿಯೂ ಇಲ್ಲಿಂದ 13 ಕಿಲೊಮೀಟರ್ ದೂರದ ನಾಂಗಲ್ ಎಂಬಲ್ಲಿಯೂ ಸಟ್ಲೆಜ್ (ಶತದ್ರು) ನದಿಗೆ ಅಡ್ಡವಾಗಿ ಕಟ್ಟೆಗಳನ್ನು ನಿರ್ಮಿಸಲಾಗಿದೆ. ಮಳೆಗಾಲದಲ್ಲಿ ಈ ನದಿಯಲ್ಲಿ ಉಂಟಾಗುವ ಮಹಾಪೂರದಿಂದ ಆಗುವ ಹಾನಿಯನ್ನು ತಡೆಗಟ್ಟಲು, ಬೇಸಗೆಯ ಕಾಲದಲ್ಲಿ ನದಿನೀರಿನ ಗಾತ್ರ ಕಡಿಮೆಯಾಗಿ ನೀರಿನ ಪೂರೈಕೆ ಅಸಾಧ್ಯವಾಗುವುದನ್ನು ತಪ್ಪಿಸಲು ಪಂಜಾಬ್, ಹರಿಯಾಣಗಳ ಭೂಮಿಯನ್ನು ನೀರಾವರಿಗೆ ಯೋಗ್ಯವಾಗಿ ಮಾಡಲು ಈ ಪ್ರದೇಶ ಹಾಗೂ ಇನ್ನಿತರ ಪ್ರದೇಶಗಳಿಗೆ ವಿದ್ಯುತ್‍ಪೂರೈಕೆ ಮಾಡಲು, ಭೂಸಂರಕ್ಷಣೆಮಾಡಲು ಇತ್ಯಾದಿ, ಈ ವಿವಿಧೋದ್ದೇಶ ಯೋಜನೆಯನ್ನು ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನ ರಾಜ್ಯಗಳು ಸಂಯುಕ್ತವಾಗಿ ಕೈಗೊಂಡವು.

	1947ರಲ್ಲಿ ಪಂಜಾಬ್ ವಿಭಾಗವಾದ ಬಳಿಕ ಸಿಂಧು ಮತ್ತು ಚೀನಾಬ್ ನದಿಗಳ ನೀರಿನ 80% ಭಾಗ ಪಾಕಿಸ್ತಾನಕ್ಕೆ ಸೇರಿಹೋಯಿತು. ಪೂರ್ವಪಂಜಾಬ್ ಪಾಟಿಯಾಲ ಮತ್ತು ರಾಜಸ್ಥಾನಗಳಲ್ಲಿ ಮಳೆ ಕಡಿಮೆ ಬೀಳುತ್ತಿದ್ದುದರ ಕಾರಣ ಜನವಸತಿಗೂ ಷಶುಗಳಿಗೂ ನೀರಿನ ಅಭಾವ ತಲೆದೋರುತ್ತಿತ್ತು. ಈ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ ಮೂಲ ಉದ್ದೇಶವಿಟ್ಟುಕೊಂಡು ಸಟ್ಲೆಜ್ ನದಿಗೆ ಅಡ್ಡಲಾಗಿ ಕಟ್ಟೆ ಕಟ್ಟಲು, ಜಲಾಶಯ ನಾಲೆ ಇತ್ಯಾದಿಗಳನ್ನು ನಿರ್ಮಿಸಲು 1952ರಲ್ಲಿ ಈ ಯೋಜನೆ ಪ್ರಾರಂಭವಾಯಿತು. ಕ್ರಮೇಣ ವಿವಿಧ ಉದ್ದೇಶಗಳಿಗೂ ಇದನ್ನು ವಿಸ್ತರಿಸಿ ಸಮಗ್ರವಾಗಿ ವಿವಿಧೋದ್ದೇಶ ಯೋಜನೆ ಎಂದು ಪರಿಗಣಿಸಲಾಯಿತು.

	ಈ ಯೋಜನೆಯ ಅನ್ವಯ ನಿರ್ಮಿಸಲಾದ ನೇರಗುರುತ್ವಮಾದರಿಯ ಭಾಕ್ರಾ ಕಟ್ಟೆಯ ಎತ್ತರ 225.55 ಮೀ. ಉದ್ದ 518.16 ಮೀ; ನಾಂಗಲ್ ಕಟ್ಟೆಯ ಎತ್ತರ 29 ಮೀ; ಉದ್ದ 304.8 ಮೀ, ಭಾಕ್ರಾ ಕಟ್ಟೆ ನಿರ್ಮಾಣದ ಸಲುವಾಗಿ ಗೋವಿಂದ ಸಾಗರ ಎಂಬ ಬೃಹತ್ ಜಲಾಶಯ ಉಂಟಾಯಿತು. ಈ ಜಲಾಶಾಯದ ಜಲ ಸಂಗ್ರಹಣಸಾಮಥ್ರ್ಯ 9621 ದಶಲಕ್ಷ ಘನಮೀಟರುಗಳು. ಭಾಕ್ರಾನಂಗಲ್ ಯೋಜನೆಯ ಇತರ ಘಟಕಗಳು: 64.5 ಮೀ. ಉದ್ದದ ನಾಂಗಲ್ ಹೈಡಲ್‍ನಾಲೆ, ಭಾಕ್ರದ ಎಡದಂಡೆ ಬಲದಂಡೆಗಳಲ್ಲಿ ತಲಾ ಒಂದರಂತೆ ವಿದ್ಯುಚ್ಛಕ್ತಿ ಸ್ಥಾವರಗಳು, ಗಂಗುವಾಲ್ ಮತ್ತು ಕೋಟ್ಲ ಎಂಬಲ್ಲಿಯ 6 ವಿದ್ಯುಜ್ಜನಕಗಳು, ಸುಮಾರು 1100 ಕಿಲೊಮೀಟರುಗಳ ಉದ್ದದ ಉಪಕಾಲುವೆಗಳು, ಸುಮಾರು 3360 ಕಿಲೊಮೀಟರುಗಳ ಉದ್ದದ ವಿತರಣ ಕಾಲುವೆಗಳು. ಈ ಯೋಜನೆಯ ಪರಿಣಾಮವಾಗಿ 26 ಲಕ್ಷ ಹೆಕ್ಟೇರು ಭೂಮಿ ನೀರಾವರಿಗೆ ಒಳಗಾಗಿದೆ; 9 ಲಕ್ಷ ಹೆಕ್ಟೇರುಗಳಷ್ಟು ಭೂಮಿಗೆ ನೀರಾವರಿ ಸೌಕರ್ಯ ಉತ್ತಮಗೊಂಡಿದೆ. ಈ ಪ್ರದೇಶದ 128 ಪಟ್ಟಣಗಳಿಗೆ ವಿದ್ಯುತ್ ಪೂರೈಕೆ ಆಗಿದೆ. 13,000 ಗ್ರಾಮಗಳಿಗೆ ವಿದ್ಯುತ್ ಸೌಲಭ್ಯ ಒದಗಿದೆ.

	ಭಾಕ್ರ ಕಟ್ಟೆ: ಪ್ರಪಂಚದ ಎತ್ತರದ ಕಾಂಕ್ರೀಟ್ ಕಟ್ಟೆಗಳ ಪೈಕಿ ಒಂದು ಇದರ ನಿರ್ಮಾಣ ಕಾರ್ಯ ಪ್ರಾರಂಭವಾದದ್ದು 1952ರಲ್ಲಿ. ಭಾರತದ ಆಗಿನ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಪ್ರಾರಂಭೋತ್ಸವ ನೆರವೇರಿಸಿದರು. ಈ ಕಾಂಕ್ರೀಟಿನ ಕಟ್ಟೆಯ ಎತ್ತರ ತಳಪಾಯದಿಂದ 255.55 ಮೀ ಹೊಳೆಯ ತಳಮಟ್ಟದಲ್ಲಿ ಕಣಿವೆಯ ಅಗಲ ಸುಮಾರು 76 ಮೀ. ತಳಪಾಯದ ಮಟ್ಟ ಸಮುದ್ರಮಟ್ಟಕ್ಕೆ ಸುಮಾರು 293 ಮೀ ಎತ್ತರದಲ್ಲಿದೆ. ಕಟ್ಟೆಯ ತಲೆ ಮಟ್ಟ 518.16 ಮೀ. ಕಟ್ಟೆಯನ್ನು ಮರಳುಗಲ್ಲಿನ ತಳಪಾಯದ ಮೇಲೆ ನಿರ್ಮಿಸಲಾಗಿದೆ. ಈ ಕಟ್ಟೆ ನಿರ್ಮಾಣಯೋಜನೆಯ ಅನ್ವಯ 7191 ದಶಲಕ್ಷ ಘನ ಮೀಟರುಗಳಷ್ಟು ಜಲ ಸಂಗ್ರಹಣೆ, ನೀರಾವರಿ ಮತ್ತು ವಿದ್ಯುತ್ ಉತ್ಪಾದನೆಗಳಿಗೆ ಅವಕಾಶ ಒದಗಿದೆ.

	ಯೋಜನೆಯ ಸಂವಿಧಾನದಲ್ಲಿ ಸೂಚಿಸಿರುವಂತೆ 10,000 ವರ್ಷಗಳಲ್ಲಿ ಒಮ್ಮೆ ಬರಬಹುದಾದ 4 ಲಕ್ಷ ಕ್ಯೂಸೆಕ್ ನೀರನ್ನು ಹೊರಗೆ ಬಿಡಲು ಅವಕಾಶಮಾಡಿದೆ. ಕೋಡಿಗೆ ಅದರ ತ್ರಿಜ್ಯದ ದಿಕ್ಕಿನಲ್ಲಿ ಅರೀಯ (ರೇಡಿಯಲ್) ಕದಗಳಿಗೆ ಕಟ್ಟೆಯ ಮೇಲಿನಿಂದ ಉರುಳಿ ಹರಿಯುವ ಕೋಡಿಯ ನೀರಿನ ರಭಸವನ್ನು ತಳದಲ್ಲಿ ಹೈq್ರÁಲಿಕ್ ಜಂಪ್ ತತ್ತ್ವದ ಅನ್ವಯ ಚದರಿಸಿ ತಡೆಯುವುದಿದೆ. ಭಾಕ್ರಾ ಕಟ್ಟೆಯಲ್ಲಿ 16 ಹೊಳೆಯ ಕದಗಳೂ 10 ಉಕ್ಕಿನ ಪೆನ್‍ಸ್ಟಾಕ್ ತೂಬುಗಳೂ ಸೇರಿ 4 ಲಕ್ಷ ಕ್ಯೂಸೆಕ್ ಪ್ರವಾಹನೀರನ್ನು ಹೊರದೂಡುತ್ತವೆ. ತೂಬುಗಳನ್ನು ಕಟ್ಟೆಯೊಳಗಡೆ ಇಟ್ಟಿದೆ.	ಎಡದಂಡೆಯ ಬಳಿಯ ವಿದ್ಯುಚ್ಛಕ್ತಿ ಸ್ಥಾವರ ತಲಾ 90 ಮೆಗಾವಾಟ್ ಸಾಮಥ್ರ್ಯದ ಐದು ವಿದ್ಯುಜ್ಜನಕಗಳನ್ನೂ ಬಲದಂಡೆ ಬಳಿಯ ವಿದ್ಯುಚ್ಛಕ್ತಿಸ್ಥಾವರ ತಲಾ 120 ಮೆಗಾವಾಟುಗಳ ಸಾಮಥ್ರ್ಯದ ಐದು ವಿದ್ಯುಜ್ವನಕಗಳನ್ನೂ ಹೊಂದಿದೆ.

	ಜಲಾಶಯದಿಂದ ಸುಮಾರು 2.59 ಮೀ ವ್ಯಾಸದ ತೂಬುಗಳು ನೀರಾವರಿಗೂ ಸುಮಾರು 4.5 ಮೀ ವ್ಯಾಸದ ತೂಬುಗಳು ವಿದ್ಯುದುತ್ಪಾದನೆಗೂ ನೀರನ್ನು ಹೊರಬಿಡುತ್ತವೆ. ಪಂಜಾಬಿನ ರೋಟಕ್ ಮತ್ತು ಹಿಸ್ಸಾರ್ ಜಿಲ್ಲೆಗಳ ಸುಮಾರು 26,30,550 ಹೆಕ್ಟೇರ್ ಭೂಮಿಗೂ ಪಕ್ಕದ ರಾಜಸ್ಥಾನದ ಸುಮಾರು 14,56,920 ಹೆಕ್ಟೇರ್ ಭೂಮಿಗೂ ಪಕ್ಕದ ರಾಜಸ್ಥಾನದ ಸುಮಾರು 14,56,920 ಹೆಕ್ಟೇರ್ ಭೂಮಿಗೂ ಈ ಯೋಜನೆಯಿಂದ ನೀರು ಒದಗುತ್ತದೆ.

	ಕಮರಿಯ ಕೆಲಸ ಪ್ರಾರಂಭಮಾಡಲು ನೀರನ್ನು ಸುಮಾರು 15 ಮೀ ವ್ಯಾಸದ ಎರಡು ಸುರಂಗಗಳಿಂದ ಆಚೆಗೆ ಒಯ್ದಿದ್ದಾರೆ. ಈ ಸುರಂಗಗಳಿಗೆ ನೀರಿನ ಪೂರೈಕೆಗಾಗಿ ಎರಡು ಮಣ್ಣಿನ ಏರಿಗಳನ್ನು ನಿರ್ಮಿಸಲಾಗಿದೆ. ಇವುಗಳ ಪೈಕಿ ಒಂದರ ಎತ್ತರ ಸುಮಾರು 65 ಮೀ. ಇದು ಭಾರತದಲ್ಲೇ ಅತ್ಯಂತ ಎತ್ತರದ ಏರಿ. ಕಟ್ಟೆಯ ನಿರ್ಮಾಣವನ್ನು ಭಾರತೀಯ ಎಂಜಿನಿಯರುಗಳು ಅತ್ಯಾಧುನಿಕ ಯಂತ್ರಗಳ ಹಾಗೂ ಅಮೆರಿಕದ ಪ್ರವೀಣರ ಸಹಾಯ ಸಹಕಾರದೊಂದಿಗೆ ನಡೆಸಿದರು. ಭಾಕ್ರಾ ಕಟ್ಟೆಯ ಜಲಾಶಯಕ್ಕೆ ಗೋವಿಂದ ಸಾಗರ ಎಂದು ಹೆಸರು. ಇದರ ಉದ್ದ 96.5 ಕಿಮೀ; ಜಲ ಶೇಖರಣ ಸಾಮಥ್ರ್ಯ 9,621 ದಶಲಕ್ಷ ಘನಮೀ. ಪ್ರಮುಖ ಕಾಲುವೆ ರಾಯಪುರ ಎಂಬ ಸ್ಥಳದಿಂದ ಪ್ರಾರಂಭವಾಗುತ್ತದೆ. ಇದರ ಉದ್ದ 168 ಕಿಮೀ.

	ನಾಂಗಲ್‍ಕಟ್ಟೆ: ಭಾಕ್ರಾ-ನಾಂಗಲ್ ನದೀಕಣಿವೆ ಯೋಜನೆಯ ಒಂದು ಘಟಕ. ಭಾಕ್ರಾ ಕಣಿವೆಗೆ 13 ಕಿಮೀ ದೂರದಲ್ಲಿ ನಾಂಗಲ್ ಎಂಬಲ್ಲಿ ನಿರ್ಮಿಸಲಾದ ಕಾಂಕ್ರೀಟ್ ಕಟ್ಟೆ. ಎತ್ತರ 29 ಮೀ, ಉದ್ದ 304.8ಮೀ. ಇದಕ್ಕೆ ಸುಮಾರು 9 ಮೀ ಅಗಲದ 26 ಅಂಕಣಗಳಿವೆ. ಕಟ್ಟೆಯ ಮೇಲ್ಮಟ್ಟದಿಂದ ಸುಮಾರು 8 ಮೀ ಆಳಕ್ಕೆ ಸುಮಾರು 1.75 ಮೀ ಅಗಲದ, ಸುಮಾರು 2 ಮೀ, ಎತ್ತರದ ಎರಡು ತನಿಖಾಗ್ಯಾಲರಿಗಳಿವೆ. ಕಟ್ಟೆಯ ಕೆಳಭಾಗದಲ್ಲಿ ಸುಮಾರು 103 ಮೀ ಉದ್ದದನೆಲಹಾಸು ಇದೆ.

	ಭಾಕ್ರಾ ಕಟ್ಟೆಯ ಜಲಗಾತ್ರದಲ್ಲಿ ಪ್ರತಿದಿನವೂ ಉಂಟಾಗುವ ಏರುಪೇರುಗಳನ್ನು ಸಮತೋಲಿಸಲು ನಾಂಗಲ್ ಕಟ್ಟೆಯನ್ನು ನಿರ್ಮಿಸಲಾಗಿದೆ. ಇದರಿಂದ ನಾಂಗಲ್ ಹೈಡಲ್ ನಾಲೆಯ ಬಳಿಯಿರುವ ವಿದ್ಯುದಾಗಾರಗಳ ಮೇಲೆ ಒದಗುವ ವಿದ್ಯುತ್ತಿನ ಹೊರೆಯ ಏರುಪೇರುಗಳನ್ನು ಧರಿಸಿಕೊಳ್ಳುವುದೂ ಸಾಧ್ಯವಾಗಿದೆ.

	ನಾಂಗಲ್ ಹೈಡಲ್ ನಾಲೆ: ಇದು ಸಟ್ಲೆಜ್ ನದಿಯ ಎಡರಂಡೆಯಿಂದ ಹೊರಟು ಸಿವಾಲಿಕ್ ಬೆಟ್ಟಗಳ ಪಕ್ಕದಲ್ಲಿ ಸಾಗುತ್ತದೆ. 1954ರಲ್ಲಿ ತೋಡಿದ ಈ ನಾಲೆ ಪ್ರಪಂಚದ ಅತ್ಯಂತ ಉದ್ದವಾದ ನಾಲೆಗಳ ಪೈಕಿ ಒಂದು. ನಾಲೆಯ ಉದ್ದ 64.5 ಕಿಮೀ. ಅಳ ಸುಮಾರು 6ಮೀ. ಇಳಿಜಾರು 1/10,000. ಗಂಗುವಾಲ್ ಮತ್ತು ಕೋಟ್ಲ ಎಂಬಲ್ಲಿ ಈ ನಾಲೆಯ ಸಹಜ ಜಲಪಾತಗಳಿವೆ. ಇವನ್ನು ವಿದ್ಯುದುತ್ಪಾದನೆಗೆ ಬಳಸಿಕೊಳ್ಳಲಾಗಿದೆ. ನಾಲೆಯ ಜಲವಾಹಕ ಸಾಮಥ್ರ್ಯ 12,500 ಕ್ಯೂಸೆಕುಗಳು. ಈ ನಾಲೆಯಿಂದ ಪಂಜಾಬ್, ರಾಜಸ್ಥಾನ, ಪಾಟಿಯಾಲಾಗಳ 40,47,000 ಹೆಕ್ಟೇರುಗಳ ಪ್ರದೇಶದ ನೀರಾವರಿಗೆ ಒಳಪಟ್ಟಿದೆ. ಸುಮಾರು 4 ಮೀಗಳ ಎತ್ತರಕ್ಕೆ ನೀರು ಇರುವ ಈ ನಾಲೆಯನ್ನು ಸುಮಾರು 40 ಮೀ ಆಳದ ತೋಡುಗೆಲಸದಲ್ಲಿಯೂ ಸುಮಾರು 30 ಮೀ ಎತ್ತರದ ಏರಿಗಳ ನಡವೆಲ್ಲಿಯೂ ತೆಗೆದುಹೊಂಡು ಹೋಗಿದ್ದಾರೆ.

	ನಾಂಗಲ್ ಹೈಡಲ್ ನಾಲೆಯ ಎರಡು ಪ್ರತ್ಯೇಕ ವಿದ್ಯುತ್ಕೇಂದ್ರಗಳಿವೆ: ನಾಂಗಲ್ ಕಟ್ಟೆಯ ಕೆಳಗೆ 19 ಕಿಮೀ ದೂರದಲ್ಲಿ ಗಂಗುವಾಲ್‍ನಲ್ಲಿ ಒಂದು; ಕಟ್ಟೆಯಿಂದ ಸುಮಾರು 10 ಕಿಮೀ ದೂರದ ಕೋಟ್ಲ ಎಂಬಲ್ಲಿ ಇನ್ನೊಂದು. ಎರಡೂ ಸ್ಥಳಗಳಲ್ಲಿಯ ಸ್ಥಾವರಗಳ ಒಟ್ಟು ವಿದ್ಯುಚ್ಛಕ್ತಿ ಸಾಮಥ್ರ್ಯ 154 ಮೆಗಾ ವಾಟುಗಳು. ನಾಂಗಲ್ ಜಲವಿದ್ಯುತ್ ವ್ಯವಸ್ಥೆಯಿಂದ ರೂಪರ್, ಅಂಬಾಲ, ಕಾರ್ನಾಲ, ಪಾಣಿಪಟ್, ಹಿಸ್ಸಾರ್, ಕಸೌಲಿ, ರೋಟಕ್, ನಾಭಾ ಪಾಂಟಿಯಾಲ, ಫಿರೋಜಪುರ, ಫರೀದ್‍ಕೋಟೆ, ಕಾಲ್ಕ, ಸಿಮ್ಲ, ಜಲಂಧರ್, ಹೋಷಿಯಾರ್‍ಪುರ್, ಕಾಪುರ್‍ತಾಲ. ದಿಲ್ವಾನ್ ಮತ್ತು ಇತರ ಪಟ್ಟಣಗಳಿಗೆ ವಿದ್ಯುತ್ ಪೂರೈಕೆ ಆಗುತ್ತಿದೆ. ಗಂಗುವಾಲ್ ವಿದ್ಯುತ್ಕೇಂದ್ರದ ತಳಪಾಯ ತೆಪ್ಪದ ಮಾದರಿಯಲ್ಲಿದೆ. ಭಾಕ್ರಾ ಕಟ್ಟೆಯ ನಿರ್ಮಾಣ ಕಾರ್ಯದಲ್ಲಿ ಈ ಕೇಂದ್ರದಿಂದ ಉತ್ಪತ್ತಿಯಾದ ವಿದ್ಯುತ್ತನ್ನು ಬಳಸಿಕೊಂಡಿದ್ದಾರೆ. ಕೇಂದ್ರದ ಅಂತಿಮಘಟ್ಟ 10,000 ಕಿಲೊವಾಟುಗಳ ಸಾಮಥ್ರ್ಯದ 10 ವಿದ್ಯುಜ್ಜನಕಗಳನ್ನು ಒಳಗೊಂಡಿದೆ. ಭಾಕ್ರ ಯೋಜನೆಯ ವಿದ್ಯುತ್ಕೇಂದ್ರ ನಾಂಗಲ್ ಕೇಂದ್ರದೊಂದಿಗೆ ಕೂಡಿ ಕೆಲಸ ಮಾಡುತ್ತಿದೆ.

	ಕೋಟ್ಲ ವಿದ್ಯುತ್ಕೇಂದ್ರ ನಾಂಗಲ್ ನಾಲೆಯಿಂದ ಸುಮಾರು 30 ಕಿಮೀ ದೂರದಲ್ಲಿದೆ. ಇಲ್ಲಿ 24,000 ಕಿಲೊವಾಟುಗಳ ಸಾಮಥ್ರ್ಯದ ಎರಡು ವಿದ್ಯುಜ್ಜನಕಗಳಿವೆ. ಇವನ್ನು 33,500 ಅಶ್ವಸಾಮಥ್ರ್ಯದ ಕಪ್ಲಾಸ್ ತಿರುಬಾನಿಗಳಿಗೆ ಜೋಡಿಸಿದೆ.

	ನಾಂಗಲ್ ಕಟ್ಟೆಯ ಪ್ರದೇಶದಲ್ಲಿ ಮೂರನೆಯ ವಿದ್ಯುಜ್ಜನಕವನ್ನು ಸ್ಥಾಪಿಸುವುದಕ್ಕೂ ಅವಕಾಶ ಕಲ್ಪಿಸಲಾಗಿದೆ. ಇದರಿಂದ 29,000 ಕಿಲೊವಾಟುಗಳಷ್ಟು ವಿದ್ಯುತ್ತು ಉತ್ಪತ್ತಿಯಗುತ್ತದೆ. 1967ರ ಸೆಪ್ಟೆಂಬರಿನಿಂದಲೂ ಗಂಗುವಾಲ್ ಮತ್ತು ಕೋಟ್ಲ ವಿದ್ಯುದುತ್ಪಾದನಾ ಕೇಂದ್ರಗಳಿಂದ ದೆಹಲಿ, ಗೊರೆಗಾಂವ್, ಪಾಲ್‍ವಾಲ್ ಮತ್ತು ರೂವಾರಿಗಳಿಗೂ ವಿದ್ಯುತ್ತಿನ್ನು ಒದಗಿಸಲಾಗಿದೆ. 
(ಎಚ್.ಸಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ